ಬದಿಯಲ್ಲಿ ಸಾಲು ಮರಗಳ ನೆರಳು
ನಡುವೆ ಕಾಲುಹಾದಿ, ನೆತ್ತಿಯ ಮೇಲೆ ಮೋಡಗಳ ಇಣುಕಾಟ,
ಮರದ ರೆಂಬೆಗಳ ನಡುವೆ ಜೂಟಾಟ;
ಮಳೆ ಬರುವ ಮುನ್ನ ಮನೆ ಸೇರುವ ತವಕ, ಆಕೆಗೆ
ವರುಣದೇವನ ಮನದಿಚ್ಚೆ ಆಕೆಗೆ ಅರಿವಿಲ್ಲ
ಎಲ್ಲಿಂದಲೋ ಬಂದ ಸಿಡಿಲ ಕಂಪನ,
ಹಿಂದೆಯೇ ಕೋಲ್ಮಿಂಚ ಬಾಣ, ಚಿಟಪಟ ಸದ್ದು,
ತುಂತುರು ಹನಿಗಳು ಆಕಾಶದಿಂದುದುರಿ
ಇಳೆಯ ಬೆರೆಯುತಿದೆ, ಬೆಚ್ಚನೆಯ ಟಾರ್ ರಸ್ತೆಯ ತಣ್ಣಗಾಗಿಸುತಿದೆ
ಮುತ್ತಿನ ಮಣಿಯಂತೆ ಮಿನುಗುತಿಹ ಮಳೆಹನಿಯ ನೋಡುತ್ತ
ಒಂದರೆಕ್ಷಣ ನಿಬ್ಬೆರಗಾಗಿ ನಿಂತಿಹಳು
ಆಕೆಯ ಕಣ್ಣುಗಳಲಿ ಹೇಳಲಾಗದ ಆನಂದ
ಮುಂಗಾರು ಮಳೆಯ ಆಕರ್ಷಣೆಯೇ? ಮತ್ತೆ,
ದೂರದೂರಿನ ಇನಿಯನ ಸವಿನೆನಪೇ?
ತಿಳಿದಿಲ್ಲ ಆಕೆಗೆ, ಆದರೂ ಮನದೊಳಗೊಂದು ಉಲ್ಲಾಸ
ಮಳೆಯ ನಿಶೆಯಲ್ಲಿ ತೊಯ್ದ ಅರಿವೆಯ ಅರಿವಿಲ್ಲ
ಮನಸು ಹೊಂಗನಸ ನೇಯುತಿದೆ, ಭಾವನೆಗಳ ನೂಲಿನಿಂದ
ಈ ಕ್ಷಣ ಕೊನೆಯಾಗದಿರಲೆಂದು ಹಾರೈಸುತಿದೆ ಜೀವ ಒಲವಿನಿಂದ
ಆಗಲೇ ಮೊಳಗಿತ್ತು ಗುಡುಗು ಸಿಡಿಲಿನ ಆರ್ಭಟ,
ಆಕೆಗೆ ಅಸ್ತಿತ್ವದ ಅರಿವು ಮೂಡಿಸುತ್ತ;
ಕಲ್ಪನೆಯು ಬರಿಯ ಭ್ರಮೆಯಾಗಿತ್ತು,
ಕನಸು ನನಸಾಗದೇ ಕೊನೆಯಾಗುತ್ತ...
-ಶ್
No comments:
Post a Comment