Monday, 20 September 2010

ನೆನಪು

ನಿನ್ನ ನೆನಪೇ ಹಾಗೆ,
ಮುಂಜಾನೆಯ ಮಂಜಿನ ಮುಸುಕಿನ ಹಾಗೆ,
ಇರುಳಲಿ ಕಾಡುವ ಕನಸಿನ ಹಾಗೆ,
ಚಿಗುರೆಲೆಯ ಅಪ್ಪಿದ ಇಬ್ಬನಿಯ ಹಾಗೆ,
ಮೊದಲ ಮಳೆಯು ಇಳೆಯ ಚುಂಬಿಸಿದ ಹಾಗೆ;
ಆ ಸವಿಚುಂಬನಕಾಗಿ  ಹಾತೊರೆವ ನವಿಲಂತೆ ನಾನು
ನೀ ಬರುವ ಹಾದಿಯ ಕಾದಿರುವೆ, ಗರಿಬಿಚ್ಚಿ
ತಂಗಾಳಿಯ ಅಲೆದಾಟಕೆ ಮುಂಗುರುಳು ನಲಿದಾಡುವಾಗ,
ಎಲ್ಲೋ ಮರೆತ ಪಲ್ಲವಿಯ ಗುನುಗುನಿಸುವಾಗ,
ಸ್ಮೃತಿಪಟಲದೊಳಡಗಿದ ಭಾವಗಳ ಹೆಕ್ಕಿ ತರುವಾಗ,
ನಿನ್ನ ಅಸ್ತಿತ್ವದ, ನಿನ್ನ ಸಾಮೀಪ್ಯದ, ಆ ನಿನ್ನ ಸಾನಿಧ್ಯದ ನೆನಪು.
ಚುಮುಚುಮು ಚಳಿಯಲಿ ಬೆಚ್ಚಗಿನ ಅನುಭವ
ತಪಸ್ವಿನಿಯ ತಪೋಗಾಥೆಯಂಥ ಅನುಭಾವ:
ಬಾಗಿಲೊಳು ನಳನಳಿಸಿಹ  ಹಸಿರು ತೋರಣ
ಕೂಗಿ ಕರೆದಿದೆ ನಿನ್ನ, ಬರುವೆ ಎಂದೋ ನೀನು?
ನನ್ನ ಮನವ ತುಂಬಲು, ನನ್ನೆದೆಯ ಮನೆಯ ತುಂಬಲು
ಕಾಯುತಿದೆ ಜೀವ, ಆಸೆಯೆಂಬ ಹೊರೆಯ ಹೊತ್ತು
ಕಾಡಬೇಡ ಇನ್ನು, ಒಮ್ಮೆ ಬಂದು ಬಿಡು
ಕನಸಿನಲ್ಲಾದರೂ  ಬಂದು ನನ್ನ ಜೊತೆಗೂಡು...

No comments:

Post a Comment