Friday, 20 August 2010

ಭಾಗ್ಯದ ಲಕ್ಷ್ಮಿ ಬಾರಮ್ಮ...

ಇಂದು ವರಮಹಾಲಕ್ಷ್ಮಿ ಹಬ್ಬ. ದಕ್ಷಿಣ ಭಾರತದಲ್ಲಿ ಆಚರಿಸಲ್ಪಡುವ ಹಲವಾರು  ಹಬ್ಬಗಳಲ್ಲಿ ಇದೂ ಒಂದು. ವರಮಹಾಲಕ್ಷ್ಮಿ- ಕೇಳಿದ ವರಗಳ ಕರುಣಿಸುವ ಮಹಾತಾಯಿ, ಸಂಪತ್ತು, ಆಯಸ್ಸು, ಆರೋಗ್ಯ, ಅಷ್ಟೈಶ್ವರ್ಯಗಳ ನೀಡುವ ಇಷ್ಟದೇವತೆ, ಹೆಣ್ತನದ, ಮುತ್ತೈದೆತನದ ಸಂಕೇತ ಕೂಡ ಹೌದು.

 ಈ ಹಬ್ಬದ ಹಿಂದೆ ಒಂದು ಕಥೆಯಿದೆ. ಸುಮಾರು ವರ್ಷಗಳ ಹಿಂದೆ ಚಾರುಮತಿ ಎಂಬ ಬ್ರಾಹ್ಮಣ ಮುತ್ತೈದೆ ಇದ್ದಳು. ಆಕೆಗೆ ತನ್ನ ಪತಿಯಲ್ಲಿ ಅಪಾರ ಗೌರವ ಹಾಗೂ ಭಕ್ತಿಯಿತ್ತು, ದೇವರಲ್ಲಿ ಬಹಳ ನಂಬಿಕೆಯಿತ್ತು. ಆಕೆಗೆ ಒಂದು ದಿನ ಕನಸಿನಲ್ಲಿ ಮಹಾಲಕ್ಷ್ಮಿ ತಾಯಿ ಕಾಣಿಸಿಕೊಂಡು, ತನ್ನನ್ನು ಭಕ್ತಿಯಿಂದ ಪೂಜಿಸಿದರೆ ಆಕೆಗೆ ಹಾಗೂ ಮನೆಯವರೆಲ್ಲರಿಗೂ ಶ್ರೇಯಸ್ಸಾಗುತ್ತದೆಂದು ನುಡಿದು ಮಾಯವಾದಳು. ಮರುದಿನ ಮುಂಜಾವಿನಲಿ ಎದ್ದ ತಕ್ಷಣ ಮನೆಯವರಿಗೆ ಹಾಗೂ ಊರಿನ ಎಲ್ಲರಿಗೂ ಕನಸಿನಲ್ಲಿ ಆದುದನ್ನು ತಿಳಿಸಿದಳು. ಎಲ್ಲರೊಟ್ಟಿಗೆ ಪೂಜೆಗೆ ಅಣಿ ಮಾಡಿ ಶ್ರಧ್ಧೆ, ಭಕ್ತಿಯಿಂದ ದೇವಿಯನ್ನು ಮನಸಾರೆ ಪ್ರಾರ್ಥಿಸಿದಳು. ಪ್ರಾರ್ಥನೆಗೆ ಒಲಿದ ಮಹಾಲಕ್ಷ್ಮಿಯು ಪ್ರತ್ಯಕ್ಷಳಾಗಿ ಎಲ್ಲರಿಗೂ ಧನಧಾನ್ಯ, ಅಷ್ಟೈಶ್ವರ್ಯಗಳ ಕರುಣಿಸಿದಳು ಎಂಬ ಪ್ರತೀತಿ ಇದೆ.

ಅದೆಲ್ಲಾ ಸರಿ, ಇದು ಗೊತ್ತಿರುವ ವಿಷಯವೇ. ಈಕೆ ಈಗ ಯಾವುದರ ಬಗ್ಗೆ ಹೇಳುವುದಕ್ಕೆ ಶುರು ಮಾಡ್ತಿದ್ದಾಳೆ  ಅಂತ ಯೋಚಿಸ್ತಾ ಇದ್ದೀರ ಅಲ್ಲವಾ? ಜಾಸ್ತಿ ಕಾಯಿಸೋಲ್ಲ. ವಿಷಯ ಏನೂಂದ್ರೆ ಪ್ರತಿ ಸಾರಿ ಹಬ್ಬಕ್ಕೆ ಬೆಂಗಳೂರಿನಲ್ಲಿ ಇದ್ದ್ವಿ, ಹಬ್ಬ ಆಚರಿಸ್ತಿದ್ದ್ವಿ. ಈ ಬಾರಿ ದೂರದ UK ನಲ್ಲಿ ಇದ್ದೀನಿ, ಹಿಂದೆ ಇದ್ದ ಹಬ್ಬದ ಸಂಭ್ರಮ, ಸಡಗರ ಈಗ ಇಲ್ಲಿ ಇಲ್ಲ.

ಹೌದು, ಬಹಳ ನೆನಪಾಗುತ್ತೆ.. ಹಬ್ಬದ ದಿನ ಸೂರ್ಯ ಉದಯಿಸುವ
 ಮುನ್ನವೇ ಏಳೋದು, (ಪ್ರತಿದಿನ ಅಲ್ಲ, ಕೇವಲ
ಹಬ್ಬದ ದಿನದ ಅಭ್ಯಾಸ ಮಾತ್ರ), ಮನೆ
ಶುಭ್ರಗೊಳಿಸೋದು, ಅಮ್ಮನಿಗೆ/ ಅತ್ತೆಗೆ ಪೂಜೆಗೆ
ಅಣಿಮಾಡಲು ಸಹಾಯ ಮಾಡೋದು, ಎಲ್ಲ ನೆನಪಾಗುತ್ತೆ... ಕಲಶ ಕೂರಿಸಿ, ರೇಶಿಮೆ ಸೀರೆ ಉಡಿಸಿ, ಮುಖವಾದ ತೊಡಿಸಿ, ಒಡವೆ, ಹೂವುಗಳಿಂದ ಅಲಂಕರಿಸುವುದನ್ನ ನೋಡುವುದಕ್ಕೇ ಒಂಥರಾ ಖುಷಿ..
ನಮಸ್ತೇಸ್ತು ಮಹಾಮಾಯೆ ಮತ್ತೆ ಹಲವು ಶ್ಲೋಕಗಳನ್ನ ರಾಗವಾಗಿ ಹಾಡಿಕೊಳ್ಳುತ್ತ ಪೂಜೆ ಮಾಡೋದು ಇನ್ನೊಂಥರಾ ಖುಷಿ... ಎಲ್ಲಕ್ಕಿಂತ ಹೆಚ್ಚು ಖುಷಿ ಕೊಡೋದು ಹಬ್ಬದೂಟ.. ಒಬ್ಬಟ್ಟಿಲ್ಲದ ಹಬ್ಬ ಹಬ್ಬವೇ? ಸಂಜೆ
ಪಕ್ಕದ ಮನೆಯವರಿಗೆ ಅರಿಶಿನ ಕುಂಕುಮ ಕೊಡೋದು,                 ಯಾರ ಮನೆಯಲ್ಲಿ ಚೆನ್ನಾಗಿ ಅಲಂಕಾರ ಮಾಡಿದ್ದಾರೆ
ಅಂತ ಲೆಕ್ಕ ಹಾಕೋದು..  ಹೀಗೆ  ಹಬ್ಬದ ದಿನದ ಚಟುವಟಿಕೆಗಳಿಗೆ ಕೊನೆಯೆಲ್ಲಿದೆ?  

ಅಂದಹಾಗೆ, ಒಂದು ವಿಷಯ ಹೇಳೋದ್ ಮರೆತು ಬಿಟ್ಟೆ.. ಏನ್ಗೊತ್ತ? ನಾನಿವತ್ತು ಒಬ್ಬಟ್ಟು ಮಾಡೋದಕ್ಕೆ ಪ್ರಯತ್ನಿಸಿದೆ ಹಾಗೂ ಬಹಳ ಮಟ್ಟಿಗೆ ಆ ಪ್ರಯತ್ನದಲ್ಲಿ ಸಫಲಳಾದೆ...
ಲಂಡನ್ ನಿಂದ ತಂದಿದ್ದ ಬೆಲ್ಲ.. (ನಾನಿರುವ ಜಾಗದಲ್ಲಿ ಬೆಲ್ಲ ಸಿಗೋಲ್ಲ!) ಕಾಂಟಿನೆಂಟಲ್ ನ ಬೇಳೆ, ಮೈದಾ.. ಅಮ್ಮನಿಗೆ ಹಾಗೂ ಅತ್ತೆಗೆ ಹತ್ತಾರು ಬಾರಿ ಕರೆ ಮಾಡಿ, ತಲೆ ತಿಂದು ಒಬ್ಬಟ್ಟು ಮಾಡುವ ವಿಧಾನ ತಿಳಿದುಕೊಂಡ ಬಗೆ... ಏಲ್ಲವೂ ಕೂಡಿ ಕೊನೆಗೂ ರುಚಿರುಚಿಯಾದ ಒಬ್ಬಟ್ಟು ರೆಡಿಯಾಯಿತು. Night duty ಮುಗಿಸಿ ಬಂದು ಮಲಗಿದ್ದ ಪತಿರಾಯರನ್ನ ಏಳಿಸಿ, ಊಟ ಬಡಿಸಿದಾಗ ಅವರು ಹೇಳಿದ್ದು,' ಅಂದ್ಕೊಂಡೆ, ನೀನ್ ಅಷ್ಟೊಂದು ಪ್ರೀತಿಯಿಂದ ಏಳಿಸಿದಾಗಲೇ ಅಂದ್ಕೊಂಡೆ, ಏನೋ experiment ಮಾಡಿರ್ತಿಯಾಂತ. ನಾನೊಬ್ನೇ ಅಲ್ಲವೇ, guinea pig ಸಿಗೋದು ನಿಂಗೆ, experiment ಮಾಡೋದಕ್ಕೆ'. ಅದೂ ಒಂದು ರೀತಿಯಲ್ಲಿ ನಿಜ ಅಲ್ಲವೇ? ಈ ಕಾಣದ ಊರಲ್ಲಿ ಯಾರನ್ನ ಕರೆದು ಊಟಕ್ಕೆ ಹಾಕಲಿ ನಾನು?. ಆದರೂ ಒಬ್ಬಟ್ಟು ಚನ್ನಾಗಿದೆಯೆಂದು  ಒಂದರ ನಂತರ  ಇನ್ನೊಂದರಂತೆ  ನಾಲ್ಕು ಒಬ್ಬಟ್ಟು ತಿಂದು ತುಂಬಾ ಚೆನ್ನಾಗಿದೆ ಅಂತ ಹೇಳಿದಾಗ ಮನಸ್ಸಿಗೆ ಒಂದು ರೀತಿ ಸಂತೃಪ್ತಿ... ಪುಟ್ಟ ಮೆದುಳಲ್ಲಿ  ಮತ್ತೆ ಯಾವ experiment ಮಾಡಲಿ ಅನ್ನೋ ಹೊಸ ಯೋಚನೆ ಶುರು... 

- ಶ್ವೇತ
P.S: Thanks to google and my grandfather for the story behind the festival.

No comments:

Post a Comment